ಕಪ್ಪೆ‌,ಮೊಲ ಮತ್ತು ಚೆಲ್ಸಿ ಕ್ಲಿಂಟನ್

ದ್ವಿತೀಯ ವರ್ಷದ ವೈದ್ಯಕೀಯ ಕೋರ್ಸಿನಲ್ಲಿ ಔಷಧ ಶಾಸ್ತ್ರದ Pharmacology ಅಧ್ಯಯನದಲ್ಲಿ ಹಲವಾರು ಪ್ರಯೋಗಗಳಿಗೆ ಪ್ರಾಣಿಗಳನ್ನು ಬಳಸುತಿದ್ದೆವು, ಬೆಳ್ಳನೆಯ ಮೊಲಗಳು, ಕಪ್ಪೆಗಳು. ಮುದ್ದು ಮುದ್ದು ಮೊಲಗಳನ್ನು ಕೊಟ್ಟಾಗ, ಮುದ್ದು ಮಾಡುವುದರಲ್ಲಿ ಮುಕ್ಕಾಲು ಸಮಯ ಹೋದರೆಕಾಮಾಸಕ್ತ ಮೊಲಗಳ ಚಟುವಟಿಕೆಗಳು, ಇಡಿ ತರಗತಿಯನ್ನು ಮುಜಗರಕ್ಕೀಡು ಮಾಡುತಿದ್ದವು .ಹರೆಯದ ಪೋಲಿ ತಮಾಷೆಗಳು ಕೆಲವರಿಗೆ ನಗು ಬರಿಸಿದರೆ ಕೆಲವರಿಗೆ ಮುನಿಸು ತರಿಸುತಿತ್ತು.ತರಗತಿಗಳು ಮುಂದವರಿದಂತೆ ನಿಧಾನವಾಗಿ ಮುಜುಗರ ದೂರವಾಗಿ, ಸಹಪಾಠಿಗಳ ನಡುವಣ ನಾಚಿಕೆಗಳು ಗಂಭಿರ ವೈದ್ಯಕೀಯ ಚರ್ಚೆಗಳ ರೂಪ ಪಡೆದುಕೊಳ್ಳಲಾರಂಭಿಸಿದವು .ತರಗತಿಯ ಅತ್ಯಂತ ತರಲೆ ವಿದ್ಯಾರ್ಥಿಗಳ ಗುಂಪಿನಲ್ಲಿ ಎರಡನೆಯವನಾದ್ದರಿಂದ, ನನಗೆ ತುಂಬ ಹಿಂದುಳಿದ ಅನುಭವವಾಗಿ ಮೊದಲ ಸ್ಥಾನಪಡೆಯಲು ನಿರಂತರ ಅವಿರತ ಪ್ರಯತ್ನ ಮಾಡುತಿದ್ದೆ .ಪ್ರಥಮ ಸ್ಥಾನದ ತರಲೆ ನನ್ನ ಆತ್ಮೀಯ ಮಿತ್ರನಾದರೂ ಇಬ್ಬರಲ್ಲೂ ಕಿತಾಪತಿಗಳ ಪೈಪೋಟಿ ನಡೆಯುತಿತ್ತು . ಮುಷ್ಟಿ ತುಂಬ ಹಿಡಿಯಬಹುದಾದ ಬಾಣದಂತಹ ಚೂಪು ಮುಖದ ಕಪ್ಪೆಗಳು ಹುಡುಗಿಯರನ್ನಷ್ಟೆ ಅಲ್ಲದೆ ಕೆಲ ಹಗುರ ಹೃದಯದ ಹುಡುಗರನ್ನೂ ಭಯಪಡಿಸುತಿದ್ದವು .ಕೃಷ್ಣೆಯ ತೀರದಲ್ಲಿ ಸಾವಿರಾರು ಕಪ್ಪೆಗಳನ್ನು ನೋಡಿ,ಹಿಡಿದು,ಗಾಳಕ್ಕೆ ಸಿಕ್ಕಿಸಿ ಮೀನು ಹಿಡಿಯುತಿದ್ದ ನನಗೆ ಕಪ್ಪೆಗಳನ್ನು ನೋಡಿ ಭಯಪಡುವವರ ಪರಿಸ್ಥಿತಿಗೆ ನಗುಬರುತಿತ್ತು .ಕೈಗೆ ಸಿಕ್ಕ ಕಪ್ಪೆಯ ಮೇಲೆ ಚಕ ಚಕನೆ ಮಾಡಬೇಕಾದ ಪ್ರಯೋಗ ಮಾಡಿ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡುತಿದ್ದೆ.ಮೂರು ವಿದ್ಯಾರ್ಥಿ ಗಳಿಗೆ ಒಂದು ಕಪ್ಪೆಯಂತೆ ಕೊಡಲಾಗುತಿತ್ತು.ಭಯದಿಂದ ನಡುಗುತ್ತ ಹಿಡಿದವರ ಕೈಯಿಂದ ಎಗರಿದ ಕಪ್ಪೆ ಪ್ರಯೋಗಶಾಲೆಯ ಪೀಠೋಪಕರಣಗಳ ಕೆಳಗೆ ಅಡಗಿಕೊಂಡರೆ , ವಿದ್ಯಾರ್ಥಿಗಳು ಹುಡುಕಿ ,ಹಿಡಿದು, ಪ್ರಯೋಗ ಮಾಡಿ ತೋರಿಸಬೇಕು...!! ಇಲ್ಲ ವಾದರೆ ಅಂತಿಮ ಪರೀಕ್ಷೆಯಲ್ಲಿ ಕಷ್ಟ .ಕೆಲ ಸಾರಿ ಪ್ರೋಪೆಸರ್ಗಳು ಪ್ರಯೋಗಾಲಯದಲ್ಲಿ ಇರದಿದ್ದರೆ ,ಕಪ್ಪೆಯನ್ನು ಕೆಲ ಅತೀ ಧೈರ್ಯಶಾಲಿ ಹುಡುಗ ಹುಡುಗಿಯರತ್ತ ಗುರಿ ಇಟ್ಟಂತೆ ಹಿಡಿದು ಬೆರಳ ಹಿಡಿತ ಸಡಿಲಿಸಿದಾಗ ಒಂದೆ ನೆಗೆತಕ್ಕೆ ಕಪ್ಪೆ ಕ್ಷಿಪಣಿಯಂತೆ ಗಮ್ಯದತ್ತ ಎಗರುತಿತ್ತು .ಮರುಕ್ಷಣ ಇಡಿ ಪ್ರಯೋಗಾಲಯದ ತುಂಬ ಹುಡುಗಿಯರ ಅರಚಾಟ ,ನಗು ,ಓಡಾಟ‌.ನಂತರ ಪ್ರೋಪೆಸರ್ಗಳ ಬೈದಾಟ.ಕೆಲ ಹುಡುಗಿಯರಂತೂ ಪ್ರಯೋಗಾರಂಭಕ್ಕೆ ಮುಂಚೆ ಬಂದು ನಮ್ಮಂತವರ ಕೈ ಮುಗಿದು

" ದಯವಿಟ್ಟು ಕಪ್ಪೆ ನನ್ನ ಮೇಲೆ ಬಿಡಬೇಡ ಮಾರಾಯಾ ಸಂಜೆ ನಿನಗೆ ಟ್ರೀಟ್ ಕೋಡ್ತಿನಿ " ಅಂದರೆ ಅಂಹಿಸೆ ಪಾಲಿಸುವವರು

" ನನ್ನ ಕಪ್ಪೆನಾ ಸ್ವಲ್ಪ ಕೊಯ್ದು ಕೊಡೋ" ಎಂದೂ ಎಂದು ಕೇಳಿಕೊಳ್ಳುತಿದ್ದರು . ಕಾಲೆಜ್ ಬೇಕರಿಯಲ್ಲಿ ಬಿಟ್ಟಿ ಟ್ರೀಟ್ ನಿಂದ ಹಿಡಿದು , ಅಂತಿಮ ಪರೀಕ್ಷೆಯಲ್ಲಿ ಸಹಾಯ ಕೂಡ ಮಾಡಿದುದು ಮಂಡೂಕರಾಯನ ಕೃಪೆಯೆ .ಔಷಧಶಾಸ್ತ್ರದ ಅಂತಿಮ ಪ್ರಾಯೋಗಿಕ ಪರೀಕ್ಷೆಯಲ್ಲಿ ನಾನು ಓದದೆ ಇದ್ದ, ತಿಳೀಯಲಾರದ ಪ್ರಯೋಗ ಮಾಡಬೇಕಾಗಿತ್ತು....!! ,ಪರೀಕ್ಷಕರ ಹದ್ದುಗಣ್ಣಿನಲ್ಲಿ ಕಾಪಿ ಅಸಾಧ್ಯ, ಪಕ್ಕದಲ್ಲಿದ್ದವರನ್ನು ಮಾತನಾಡಿಸಿದರೆ ಅರ್ಧಚಂದ್ರ ಪ್ರಯೋಗ .ಓದಲಾರದ ಪ್ರಯೋಗ ಮಾಡಲಾಗದೆ ಕೈಯಲ್ಲಿ ಕಪ್ಪೆ ಹಿಡಿದು ನೀರಿನಿಂದ ಹೊರಬಂದ ಮೀನಿನಂತೆ ಚಡಪಡಿಸುತಿದ್ದೆ .ಕೈಯ್ಯಲ್ಲಿ ವಟಗುಟ್ಟಿ ತನ್ನತ್ತ ನನ್ನ ಗಮನ ಸೆಳೆದ ಮಂಡೂಕರಾಯನ ನೋಡಿದಾಗ ಫಕ್ಕನೆ ತಲೆಯಲ್ಲಿ ಉಪಾಯವೊಂದು ಹೊಳೆದೆಬಿಟ್ಟಿತು .ನಮ್ಮ ತರಗತಿಯ " ಭಲೆ ಓದುಗ " ಹರ್ಷ ನನಗಿಂತ ಎರಡೂ ಟೆಬಲ್ ದೂರದಲ್ಲಿ ತನ್ನ ಪ್ರಯೋಗದಲ್ಲಿ ತಲ್ಲೀನಾನಗಿದ್ದವನ ಕಡೆ,

ಕಪ್ಪೆಯನ್ನು ಗುರಿ ಮಾಡಿ ಹಿಡಿತ ಸಡಿಸಿಲಿದೆ .ಕಪ್ಪೆ ಎಗರಿ ಹರ್ಷನ ಎದುರಿನ ಟೇಬಲ್ ಕೆಳಗಿ ಅವಿತುಕೊಂಡಿತು .ಕಪ್ಪೆ ಹಿಡಿಯುವ ನೆಪ ಮಾಡಿ ಹರ್ಷನ ಕಾಲಿನ ಹತ್ತಿರ ಕುಕ್ಕರು ಕುಳಿತು ನನಗೆ ಬೇಕಾದುದನ್ನು ಕೇಳಿಕೊಂಡೆ,ಆಪದ್ಭಾಂಧವ ಕಪ್ಪೆಯನ್ನು ಹಿಡಿದುಕೊಂಡು ಬಂದು ಪ್ರಯೋಗ ಯಶಸ್ವಿಯಾಗಿ ಮುಗಿಸಿದೆ ,ಪಾಸಾದೆ, ಮಂಡೂಕರಾಯರಿಗೆ ಜೈ....!!

ಹೀಗೊಂದು ಪ್ರಯೋಗ ತರಗತಿಯಲ್ಲಿ ಚರ್ಮಕ್ಕೆ ಹಾಕುವ ವೈಟ್ಫೀಲ್ಡ ಆಯಿಂಟ್ ಮೇಂಟ್( Whitefield's ointment) ಎಂಬ ಮುಲಾಮು ತಯಾರಿಸಬೇಕಾಗಿತ್ತು .ಒಂದೆರಡು ಔಷಧಿಗಳನ್ನು

ನಿರ್ದಿಷ್ಟ ಪ್ರಮಾಣದಲ್ಲಿ ತೂಕಮಾಡಿ ಹಾಕಿ ಪಿಂಗಾಣಿ ಪಾತ್ರೆಯಲ್ಲಿ ಕಲಸಿ ,ಗಾಜಿನ ಬಾಟಲಿಯಲ್ಲಿ ತುಂಬಿಸಿದಾಗ ಮಲಾಮು ತಯಾರು. ಕಾಲ್ಪನಿಕ ರೋಗಿಯ ಹೆಸರು , ಮಲಾಮಿನ ಹೆಸರು, ಉಪಯೋಗಿಸುವ ವಿಧಾನವನ್ನು ಬರೆದು ನಮ್ಮ ಸಹಿಮಾಡಿ ಚೀಟಿಯಲ್ಲಿ ಬರೆದು ಬಾಟಲಿಗೆ ಅಂಟಿಸಬೇಕಾಗಿತ್ತು .

ವಿಪರೀತ ಆವಿಷ್ಕಾರಿಯಾದ ನನಗೊಂದು ಉಪಾಯ ಹೊಳೆಯಿತು .ಬಿಲ್ಕ್ಲಿಂಟನ್ ಮೋನಿಕಾ ಲೆವಿನಸ್ಕಿಯ ರಾಸಲೀಲೆಯ ಕತೆಗಳು ದಿನಕ್ಕೊಂದರಂತೆ ಹರಿದು ಬರುತಿದ್ದ ಕಾಲವದು .ಒಂದು ದಿನ ಬಿಲ್ ಕ್ಲಿಂಟನ್ ಮಗಳ ಫೋಟೋ ಸಮೆತ ವರದಿಯೊಂದು ಓದಿದ್ದೆ.ನನ್ನ ಕಾಲ್ಪನಿಕ ರೋಗಿಯಾಗಿ "ಮಿಸ್ ಚೆಲ್ಸಿ ಕ್ಲಿಂಟನ್ "ಎಂದು ಬರೆದು ಅಂಟಿಸಿ ನನ್ನ ಪ್ರಯೋಗ ಪೂರ್ಣಗೊಳಿಸಿದೆ .ಕಾಲ್ಪನಿಕ ರೋಗಿಯ ಹೆಸರಿಗಾಗಿ ಹೆಣಗಾಡುತಿದ್ದ ಉಳಿದ ಸಹಪಾಠಿಗಳಿಗೆ ನನ್ನ ಉಪಾಯ ತುಂಬ ಹಿಡಿಸಿತು.ಹುಡುಗರೆಲ್ಲರೂ ,ಸಾಂಡ್ರಾ ಬುಲಕ್ ,ಶಾರೋನ್ ಸ್ಟೋನ್ ,ಸೆರೆನಾ ವಿಲಿಯಮ್ಸ ,ಮಾರ್ಟಿನಾ ಹಿಂಗಿಸ್ ,ಮಮತಾ ಕುಲ್ಕರ್ಣಿ ,ಮನಿಷಾ ಕೋಯಿರಾಲಾಗಳ ಹೆಸರುಗಳನ್ನು ಬರೆದರೆ ‌.ಪೈಪೋಟಿಗೆ ಬಿದ್ದ ಹುಡುಗಿಯರು ,ಟಾಮ್ ಕ್ರೂಸ್ ,ಆರ್ನಾಲ್ಡ,ಸ್ಟಾಲೋನ್ ,ಅಕ್ಷಯ್ ,ಶಾರುಕ್ ,ಸಚಿನ್ ,ಯುವರಾಜ್ ,ಆಂದ್ರೆ ಆಗಾಸಿ ಎಲ್ಲರ ಹೆಸರುಗಳನ್ನು ಬರೆದು ಹುಡುಗರನ್ನು ಚುಡಾಯಿಸುವಷ್ಟರಲ್ಲಿ ಅತ್ಯಂತ ಕಟ್ಟುನಿಟ್ಟಿನ ಪ್ರೋಪೆಸರ್ ಡಾ ಸರಳಾರವರು ಪ್ರಯೋಗಗಳ ವೀಕ್ಷಣೆ ಹಾಗೂ ಪಾಠಕ್ಕೆ ಬಂದರು .ಎಲ್ಲರೂ ತಮ್ಮ ತಮ್ಮ ಬಾಟಲುಗಳಲ್ಲಿ ಮುಲಾಮು ತುಂಬಿಸಿ ಹೆಮ್ಮೆಯಿಂದ ನಗುವದ ನೋಡಿ ಸಂತುಷ್ಟರಾದ ಪ್ರೋಪೆಸರ್ ಎಲ್ಲರನ್ನು ಶ್ಲಾಘಿಸುತ್ತ .ಮುಲಾಮು ಕೆಲಸಮಾಡುವ ವಿಧಾನವನ್ನು ವಿವರಸುತ್ತಿರಲು ,ಮುಂದೆ ಇದ್ದ ಬಾಟಲಿ ಮೇಲೆ ಕಣ್ಣಾಡಿಸುತ್ತ ದಿಗ್ಭ್ರಮೆಗೊಂಡು ಕಂಡ ಹೆಸರನ್ನು ನಿಧಾನವಾಗಿ

" ಪೇಷಂಟ್ ನೇಮ್ ....ಶಾ..ರೋನ್ ...ಸ್ಟೋನ್ .....ಅಡ್ರೆಸ್ ಹಾಲಿವುಡ್ ...ಯು ಎಸ್ ....ಏಜ್ ತರ್ಟಿ ತ್ರಿ ...." ಎನ್ನುತ್ತ ಪಾಠ ನಿಲ್ಲಿಸಿದರು .

" ಯಾರು ಹಾಲಿವುಡ್ ಹೀರೋಯಿನ್ಗಳ ಡಾಕ್ಟರ್ ಇಲ್ಲಿ? ‌... ಬಾಟಲಿ ಯಾರದು ?" ಎಂದಾಗ ಮಹಾನುಭಾವನೊಬ್ಬತನ್ನ ಮೂವತ್ತೆರಡೂ ದಂತಗಳನ್ನು ತೋರಿಸುತ್ತ ,ಶಾರೋನ್ ಸ್ಟೋನ್ ಸಾಕ್ಷಾತ್ಕಾರವಾದ ಆನಂದದಿ ಪ್ರೋಫಸರ್ ಮುಂದೆ ನಿಂತ .ಹೆಸರುಗಳ ಆಯ್ಕೆಗೆ ಮೆಚ್ಚುಗೆ ಸಿಗಬಹದೆಂದು ಬೀಗುತಿದ್ದವನಿಗೆ

" ಸಹಸ್ರ ನಾಮಾರ್ಚನೆ ಪ್ರಾರಂಭವಾಯಿತು ." ನಿಧಾನವಾಗಿ ಎಲ್ಲರೂ ತಮ್ಮತಮ್ಮ ಬಾಟಲುಗಳ ಮೇಲಿನ ಕಾಗದ ಕಾಣಬಾರದೆಂದು ಉಲ್ಟಾ ತಿರುಗಿಸುವ ಪ್ರಯತ್ನ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡರು .

" ಬ್ರಿಂಗ್ ಆಲ್ ಬಾಟಲ್ಸ " ಎಂದು ಅಪ್ಪಣೆ ಗೈದು ಒಂದೊಂದೆ ಬಾಟಲಿಯ ಮೇಲಿನ ಹೆಸರು ನೋಡಿದ ಪ್ರೋಪೆಸರ್ ಹೈರಾಣಾದರು .ಇಡಿ ಹಾಲಿವುಡ್ ,ಬಾಲಿವುಡ್ ,ಕ್ರಿಕೆಟ್ ,ಟೆನಿಸ್ ಲೋಕವೆಲ್ಲ ನಮ್ಮ ಪ್ರಯೋಗಾಲಯದಲ್ಲಿ ....!!!

ಹೆಸರಗಳನ್ನು ಓದಿದಂತೆ ಪ್ರೋಪೆಸರ್ ಕೋಪ ನೂರ್ಮಡಿಯಾಗುತ್ತ ಹೋಯಿತು .

ನಿಮ್ಮಪಕ್ಕದ ವಿದ್ಯಾರ್ಥಿಯ ಹೆಸರು ಬರೆಯುವದ ಬಿಟ್ಟು, ಹಾಲಿವುಡ್ಡು ,ಬಾಲಿವುಡ್ಡು ಹೋ ಹೋ, ಹುಡುಗ್ರಿಗೆ ನಾಚ್ಕೆಯಿಲ್ಲ ಅಂದ್ರೆ ಹುಡಗಿರೂ ನೀವು ಶಾರೂಕು ,ಟಾಮ್ ಕ್ರೂಸು ಆಹಾಹಾ ಇವರೆಲ್ಲ ನಿಮ್ಮತ್ರ ನವೆಗೆ ಔಷಧಿಗೆ ಬಂದಿದ್ರಾ? ಇಲ್ಲಾ ಶಾಂಪೂ ಕೆಳ್ಕೊಂಡು ಬಂದಿದ್ರಾ? ಇನ್ನೂ ಸೆಕಂಡ್ ಇಯರ್ರೆ ಪಾಸಾಗಿಲ್ಲ ಈವಾಗ್ಲೆ ಹಾಲಿವುಡ್ ಬಾಲಿವುಡ್ ಲೆವಲ್ಗೆ ನಿಮ್ಮ ಟ್ರೀಟ್ಮೆಂಟು? ಎಂದು ಕೋಪದಲ್ಲಿ ಕುದಿಯುತ್ತ ತುಂಬ ಬೈಯುತಿದ್ದರೆ, ಎಲ್ಲರಿಗಿಂತ ಹಿಂದೆ ನಿಂತಿದ್ದ ನಾನು ಕಿಸಿಕಿಸಿ ನಗುತ್ತಿದ್ದೆ. ಮುಂದೆ ನಿಂತ ಮೇಧಾವಿ ಹಾಗೂ ಡಿಸೇಂಟ್ ಹುಡುಗ ಹುಡುಗಿಯಲ್ಲ ಚೆನ್ನಾಗಿ ಬೈಸಿಕೊಂಡರು‌ .ಸುಮಾರು ಹೊತ್ತು ಬೈದ ನಂತರ ಪ್ರೋಪೆಸರ್ ಮೇಡಮ್

ಕೊನೆಯ ಬಾಟಲ್ ಮೇಲೆ ಅಮೇರಿಕಾ ರಾಷ್ಟ್ರ ಪತಿಯ ಮಗಳ ಹಸರು ನೋಡಿಕುದ್ದು ಹೋಗಿ

" ಇದೊಂದ ಬಾಕಿಇತ್ತು‌...ಇವನ್ಯಾರೋ‌‌ ಸೀದಾ ವೈಟ್ ಹೌಸ್ಗೆ ಫಾಮಿಲಿಫಿಜಿಷಿಯನ್ " ಎಂದಾಗ ನನ್ನ ಎದೆ ಡವ ಡವ ಅನ್ನಲಾರಂಭಿಸಿತು .ಸುಮಾರು ಹೊತ್ತು ನನ್ನ ಬಾಟಲಿದಿಟ್ಟಿಸಿ ಕೋಪ ತಡೆಯಲಾಗದೆ ,ನನ್ನ ಬಾಟಲಿಯನ್ನು ಟೇಬಲ್ಮೇಲೆ ಕುಕ್ಕಿ

" ಕ್ಲಾಸ್ ಡಿಸ್ಮಿಸ್ಡ " ಎಂದು ಬುಸುಗುಡುತ್ತ ಹೋದರು .

ಕಿಸಿಕಿಸಿ ನಗುತ್ತ ನಿಂತಿದ್ದ ಭಯಂಕರ ಆವಿಷ್ಕಾರಿಯಾದ ನಾನು ಇನ್ನೂ ಹೆಚ್ಚಾಗಿ ಗಹಗಹಿಸಿ ನಗಲಾರಂಭಿಸಿದೆ .

" ಎಲ್ಲಾ ನನ್ಮಗನಿಂದಾನೆ " ಎಂದು ನನ್ನನ್ನು ಅಟ್ಟಿಸಿಕೊಂಡು ಬಂದ ಫಸ್ಟ ಬೆಂಚರ್ ಮೇಧಾವಿ ಹುಡುಗ ಹುಡುಗಿಯರಿಂದತಪ್ಪಿಸಿಕೊಂಡು ಹೊರಗೋಡಿದೆ......

ಅಬುಯಾಹ್ಯಾ..

Post a Comment

0 Comments