ಬಾಲ್ಯದ ನೆನಪು

ಒಂದನೇ ತರಗತಿಯಲ್ಲಿದ್ದೆ."ಶಿಂಧೆ" ಎಂಬ ಹೆಸರಿನ ಶಿಕ್ಷಕರು.ಖಾದಿ ಧೋತರ, ಜುಬ್ಬಾ ತಲೆಯ ಮೇಲೊಂದು ಖಾದಿ ಟೊಪ್ಪಿಗೆ.

ವಿದ್ಯಾರ್ಥಿಗಳೆಂದರೇ ಸ್ವಂತ ಮಕ್ಕಳಷ್ಟೇ ಅಂತ:ಕರಣ,ಪ್ರೀತಿ. ಪಾಠಗಳಿರಲಿ,ಪದ್ಯಗಳಿರಲಿ ತಾವೂ ನಲಿಯುತ್ತ ಮಕ್ಕಳನ್ನು ನಗಿಸುತ್ತಾ ಕಲಿಸುವ ಶೈಲಿ.

ಅವರಿಗೆ ಕೋಪ ಬರೋದು ಮಕ್ಕಳು ಸಮಯ ಮೀರಿ ಶಾಲೆಗೆ ಬಂದರೆ ಮಾತ್ರ.ಅವರು ಕೊಡುವ ಶಿಕ್ಷೆ ವಿಚಿತ್ರವಾಗಿತ್ತು.

ಶಿಕ್ಷೆಯನ್ನು ಅನುಷ್ಠಾನ ಮಾಡುವ ಸಹಪಾಠಿಗಳು ಸದಾ ತುದಿಗಾಲಲ್ಲಿ ಇರುತ್ತಿದ್ದರು....

ತಡವಾಗಿ ಬಂದವ ಅವರ ಮೇಜಿನ ಪಕ್ಕ ನಿಲ್ಲಬೇಕು.

ತುದಿಗಾಲ ಮೋಹೀ ಸಹಪಾಠಿಗಳಲ್ಲೊಬ್ಬ ಸೀಮೆ ಸುಣ್ಣವನ್ನು ಕಪ್ಪು ಬೋರ್ಡಿಗೆ ಉಜ್ಜಬೇಕು. ಇನ್ನೊಬ್ಬ ಬಂದು ಬೋರ್ಡ್ ಮೇಲಿನ ಸುಣ್ಣದಿಂದ , ಮುಖದ ಮೇಲೆ ವಿಭೂತಿ,ಮೀಸೇ ....ದಾಡಿ ‌‌..

ಕೋರೆ ಹಲ್ಲು..ಮತ್ತೂ ತನ್ನ ಸೃಜನಶೀಲ ಶಕ್ತಿಗೆ ಮತ್ತೇನೇನು ಸಾಧ್ಯವೋ ಅದನ್ನೆಲ್ಲ ಮುಖವೆಂಬೋ ಕ್ಯಾನವಾಸಿನ ಮೇಲೆ ಮೂಡಿಸಬೇಕು.

ವಿದ್ಯಾರ್ಥಿಯೇ ತನ್ನ ಪಾಟಿಯ ಮೇಲೇ..

" ನನ್ನ ಹೆಸರು_ _ _ _ _ ‌‌ _ _ _ .ನಾನು ತಡವಾಗಿ ಶಾಲೆಗೆ ಬಂದಿದ್ದೇನೆ.ನನ್ನನ್ನು ಕ್ಷಮಿಸಿ"

ಅಂತ ಬರೆದುಕೊಂಡು ಪೋಲೀಸ್ ಸ್ಟೇಷನ್ ನಲ್ಲಿ ಕಳ್ಳರು ಹಿಡಿದುಕೊಂಡಂತೆ ನಿಲ್ಲಬೇಕು. ಹುಲ್ಲಿನ ಒಂದು ಕಸಬರಿಗೆಯನ್ನ ಮಗದೊಬ್ಬ ತುದಿಗಾಲಿ ದಾರದಿಂದ ಕಟ್ಟಿ ಕೊರಳಲ್ಲಿ ಹಾಕಬೇಕು....ಆಗ ಇಡಿ ವರ್ಗ ಚಪ್ಪಾಳೆ, ಕೇಕೆಯಿಂದ ಸಂಭ್ರಮಿಸಬೇಕು..

ನಂತರ ಶಾಲೆಯ ಪ್ರತಿ ವರ್ಗಕೋಣೆಗೆ ಹೋಗಿ ಅಂಜಲಿ ಬದ್ಧನಾಗಿ ಪಾಟಿಯಲ್ಲಿ ಬರೆದಿದ್ದನ್ನು ಓದಿ ಹೇಳಿ...ಮುಂದಿನ ಕೋಣೆಗೆ ಬಿಜಯಂಗೈಯಬೇಕು..

ಪ್ರತಿ ವರ್ಗದಲ್ಲಿ ಚಪ್ಪಾಳೆಯ ಸನ್ಮಾನ ಸ್ವೀಕರಿಸಬೇಕು. ಪ್ರಕ್ರಿಯೆ ಸುಮಾರು ಅರ್ಧ ಗಂಟೆಯ ಸಮಯ ನುಂಗುತ್ತಿತ್ತು.

ವಿದ್ಯಾರ್ಥಿ ಮುಂದೆ ಬರಲು ತಡವಾದರೆ ಅಂದು ಶಾಲೆಯನ್ನೇ ಬಿಡುತ್ತಿದ್ದನೇ ವಿನಹ ಒಳಗೆ ಬರ್ತಿರ್ಲಿಲ್ಲ.

ನನಗೂ ಅಂಥ ಸುದಿನ ಒಂದು ಕಾಯ್ದಿತ್ತು...

ಮನೆಯಲ್ಲಿ ರಗಳೆ ರಂಪಾಟ ಶುರು ಮಾಡಿದೆ..ಶಾಲೆಗೆ ಹೋದರೆ ಎದುರಿಸಬೇಕಾದ ಭೀಕರ ಶಿಕ್ಷೆಯನ್ನ ವಿಧ ವಿಧವಾಗಿ ಹೇಳಿ ಕರುಣೆ ಉಕ್ಕುವಂತೆ ಗೋಳಾಡಿದೆ..

ಎಲ್ಲರೂ ಕೇಳಿದರೂ ಒಬ್ಬರೂ ಅಯ್ಯೋ ಅನಲಿಲ್ಲ....ಬದಲಿಗೆ ತಂದೆ ಹೇಳಿದರು.

ನಾ ನಿನ್ನ ಸಾರಿಗೆ ಬಿಡತೇನಿ ಮಾಸ್ತರರಿಗೆ ಹಂಗ ಮಾಡಬ್ಯಾಡರೀ ಅಂತ ಹೇಳತೇನಿ. ಬಾ ನನ್ನ ಜೋಡಿ.

ನೇಣಿಗೆ ಹೊರಟವನಂತೆ ತಂದೆಯನ್ನು ಹಿಂಬಾಲಿಸಿದೆ.

ತಂದೆಯನ್ನು ನೋಡಿದವರೇ ಶಿಂಧೇ ಮಾಸ್ತರರು ಎದ್ದು ನಿಂತು

" ನಮಸ್ಕಾರ್ರೀ ಸರ್ ನೀವ್ಯಾಕ ಬರಾಕ ತ್ರಾಸ್ ತೊಗೊಂಡರೀ"

ನನಗೆ ಉಸಿರಾಟ ಸ್ವಲ್ಪ ಸರಳವಾದಂತೆನಿಸಿತು.

" ಏನಿಲ್ಲರೀ ನಿಮ್ಮನ್ನೂ ಭಾಳ ದಿನದಿಂದ ಭೆಟ್ಟಿ ಆಗಿದ್ದಿಲ್ಲಾ...ಆಮ್ಯಾಲೇ ಇವತ್ತ ಗಿರೀಶ ಸಾಲಿಗೆ ಬರೋದು ತಡಾ ಆತೂ... ಶಿಕ್ಷಾಕ್ಕ ಭಾಳ ಹೆದರಿಕೊಂಡಾನ.. "

ಮತ್ತೆ ನನಗೆ ಏದುಸಿರು...

" ಛೇ ಛೇ ಗಿರೀಶ ಸಂಭಾವಿತ ಹುಡುಗರೀ..ನೀವೇನೂ ಕಾಳಜಿ ಮಾಡಬ್ಯಾಡರೀ ..ನಿಮಗೂ ಸಾಲಿಗೆ ತಡಾ ಆಕ್ಕೈತೀ ಹೋಗಿ ಬರ್ರೀ ಸರ್ .. ನಮಸ್ಕಾರ" ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿ ಶಿಂಧೇ ಮಾಸ್ತರರು ತಂದೆಯನ್ನು ಕಳಿಸಿದರು. ತೀರ್ಥರೂಪರೂ ಅರ್ಥಗರ್ಭಿತವಾಗಿ ನಗುತ್ತಾ ಹೋದರು.

ಒಂದೊಂದೇ ಭಾರವಾದ ಹೆಜ್ಜೆ ಇಡುತ್ತಾ ನನ್ನ ಸ್ಥಾನದ ಕಡೆ ಹೊರಟೆ....ಸಹಪಾಠಿಗಳಿಗಳೆಲ್ಲ ನನ್ನನ್ನೇ ದಿಟ್ಟಿಸಿ ನೋಡುತ್ತಾ ಇದ್ದಾರೆ..

ಎಲ್ಲಿ ಹೊಂಟಿರೀ ಗಿರೀಶ ಅವರ ಇಲ್ಲಿ ಬರ್ರೀ, ಬರ್ರಿ ಟೇಬಲ್ ಕಡೇ ಬಂದ ನಿಂದರ್ರೀ.ಚೀಲದಾಗಿನ ಪಾಟಿ ಹೊರಗ ತಗೀರೀ ನೋಡೋಣೂ ಶಿಂಧೆ ಗುರುಗಳು ಗುಡುಗಿದರು.

ಹೋಗಿ ನಿಂತೆ

ಸಹಪಾಠಿಗಳು ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ತಮ್ಮ ಕೈಂಕರ್ಯಗಳನ್ನು ಮುಗಿಸಲು ನನ್ನ ಕಡೆ ಬರತೊಡಗಿದರು...

ಮುಂದಿನ ಘಟನೆಗಳ ಊಹಿಸಿ ಆನಂದಿಸಲು ಓದುಗರಿಗೇ ಬಿಟ್ಟಿರುವೆ.

 

Post a Comment

0 Comments